Gold Buying On Akshaya Tritiya 2026 : ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿ ಮಾಡ್ತೀರಾ? ಈ 5 ವಿಷಯ ಮೊದಲು ತಿಳಿದುಕೊಳ್ಳಿ.
Gold Buying On Akshaya Tritiya 2026: ಅಕ್ಷಯ ತೃತೀಯದಂದು ಚಿನ್ನದ ಖರೀದಿಯನ್ನು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದರೆ ಹಬ್ಬದ ಸಡಗರದಲ್ಲಿ ವಂಚನೆಗೊಳಗಾಗದಂತೆ ಎಚ್ಚರವಹಿಸುವುದು ಬಹಳ ಮುಖ್ಯ. ಈ ಬಾರಿ ಏಪ್ರಿಲ್ 19 ರಂದು ಅಕ್ಷಯ ತೃತೀಯ ಆಚರಿಸಲಾಗುತ್ತಿದೆ. ನೀವು ಕೂಡ ಬಂಗಾರ ಖರೀದಿಸಲು ಸಿದ್ದರಾಗುತ್ತಿದ್ದರೆ, ತಪ್ಪದೇ ಈ ಅಂಶಗಳನ್ನು ಗಮನಿಸಿ. ಚಿನ್ನದ ಶುದ್ಧತೆಯನ್ನು ಗುರುತಿಸಲು BIS ಹಾಲ್ಮಾರ್ಕ್ ಮತ್ತು HUID ಕೋಡ್ಗಳ ಜ್ಞಾನ ಅತ್ಯಗತ್ಯವಾಗಿದೆ. ನೀವು ಕಷ್ಟಪಟ್ಟು ಸಂಪಾದಿಸಿದ ಹಣಕ್ಕೆ ಸರಿಯಾದ ಮೌಲ್ಯ ಸಿಗುವಂತಾಗಲು ಚಿನ್ನ ಖರೀದಿಸುವ ಮುನ್ನ ಗಮನಿಸಬೇಕಾದ ಪ್ರಮುಖ ಸುರಕ್ಷತಾ ಕ್ರಮಗಳ ಮಾಹಿತಿ ಇಲ್ಲಿದೆ.
ಅಕ್ಷಯ ತೃತೀಯದಂದು ಚಿನ್ನದ ಆಭರಣ ಖರೀದಿಸುವುದು ಅತ್ಯಂತ ಮಂಗಳಕರ ಎಂಬ ನಂಬಿಕೆ ಇದೆ. ಭಾರತೀಯ ಸಂಪ್ರದಾಯದಲ್ಲಿ ಇದು ಕೇವಲ ನಂಬಿಕೆಯಷ್ಟೇ ಅಲ್ಲ. ಬದಲಿಗೆ ಹೂಡಿಕೆಯ ದೃಷ್ಟಿಯಿಂದಲೂ ಪ್ರಮುಖವಾಗಿದೆ. ಆದರೆ, ಹಬ್ಬದ ಸಂದರ್ಭದಲ್ಲಿ ಚಿನ್ನದ ಬೇಡಿಕೆ ಹೆಚ್ಚಿರುವುದರಿಂದ ವಂಚನೆಯ ಸಾಧ್ಯತೆಗಳೂ ಹೆಚ್ಚಿರುತ್ತವೆ. ಈ ಬಾರಿ ಏಪ್ರಿಲ್ 19 ರಂದು ಅಕ್ಷಯ ತೃತೀಯ ಆಚರಿಸಲಾಗುತ್ತಿದೆ. ಈ ಶುಭ ಸಂದರ್ಭದಲ್ಲಿ ಬಂಗಾರ ಖರೀದಿ ಮಾಡುವ ಮುನ್ನ ಕೆಲವು ಪ್ರಮುಖ ಅಂಶಗಳು ಗಮನದಲ್ಲಿರಲಿ. ಈ ಕುರಿತ ಪೂರ್ಣ ಮಾಹಿತಿ ಇಲ್ಲಿದೆ.

ಚಿನ್ನದ ಶುದ್ಧತೆಯನ್ನು ಚೆಕ್ ಮಾಡುವುದು ಹೇಗೆ?
ಚಿನ್ನದ ಶುದ್ಧತೆಯನ್ನು ಪತ್ತೆಹಚ್ಚಲು BIS ಹಾಲ್ಮಾರ್ಕ್ (Hallmark) ಅತ್ಯಂತ ವಿಶ್ವಾಸಾರ್ಹ ಮಾರ್ಗವಾಗಿದೆ. ಪ್ರತಿಯೊಂದು ಆಭರಣದ ಮೇಲೆ 6 ಅಂಕಿಗಳ HUID (Hallmark Unique Identification) ಸಂಖ್ಯೆ ಇರುತ್ತದೆ. ಇದನ್ನು ಪರಿಶೀಲಿಸಲು:
ನಿಮ್ಮ ಫೋನ್ನಲ್ಲಿ ‘BIS Care App’ ಡೌನ್ಲೋಡ್ ಮಾಡಿ.
ಆ್ಯಪ್ನಲ್ಲಿ ‘Verify HUID’ ಆಯ್ಕೆಯನ್ನು ಆರಿಸಿ.
ಆಭರಣದ ಮೇಲಿರುವ 6 ಅಂಕಿಗಳ ಕೋಡ್ ಅನ್ನು ನಮೂದಿಸಿ ಅಥವಾ ಸ್ಕ್ಯಾನ್ ಮಾಡಿ.
ಕೂಡಲೇ ಜ್ಯುವೆಲ್ಲರ್ ಹೆಸರು, ಚಿನ್ನದ ಶುದ್ಧತೆ ಮತ್ತು ತೂಕದ ಮಾಹಿತಿ ಲಭ್ಯವಾಗುತ್ತದೆ. ಈ ಮಾಹಿತಿ ಹೊಂದಿಕೆಯಾಗದಿದ್ದರೆ ಅದು ನಕಲಿ ಚಿನ್ನ ಎಂದರ್ಥ.
ಚಿನ್ನ ಖರೀದಿಸುವಾಗ ನೆನಪಿರಬೇಕಾದ 5 ಪ್ರಮುಖ ಅಂಶಗಳು

1. ಪ್ರತಿಷ್ಠಿತ ಮಳಿಗೆಗಳಿಂದಲೇ ಖರೀದಿಸಿ
ಯಾವಾಗಲೂ ಬಿಐಎಸ್ (BIS) ಪರವಾನಗಿ ಹೊಂದಿರುವ ಪ್ರತಿಷ್ಠಿತ ಜ್ಯುವೆಲ್ಲರಿ ಮಳಿಗೆಗಳಲ್ಲಿ ಮಾತ್ರ ಚಿನ್ನ ಖರೀದಿಸಿ. ಅಪರಿಚಿತ ಅಥವಾ ಸಣ್ಣ ಪುಟ್ಟ ಅಂಗಡಿಗಳಲ್ಲಿ ಆಮಿಷಕ್ಕೆ ಒಳಗಾಗಿ ಖರೀದಿಸುವುದು ವಂಚನೆಗೆ ದಾರಿಯಾಗಬಹುದು
2. ಭರ್ಜರಿ ಆಫರ್ಗಳ ಬಗ್ಗೆ ಎಚ್ಚರವಿರಲಿ
ಹಬ್ಬದ ಸಂದರ್ಭದಲ್ಲಿ ಮಾರುಕಟ್ಟೆ ದರಕ್ಕಿಂತ ಅತೀ ಕಡಿಮೆ ಬೆಲೆಗೆ ಚಿನ್ನ ನೀಡುವುದಾಗಿ ಬರುವ ಸಂದೇಶಗಳು ಅಥವಾ ಲಿಂಕ್ಗಳ ಬಗ್ಗೆ ಜಾಗರೂಕರಾಗಿರಿ. ಬೆಲೆ ಅಸಹಜವಾಗಿ ಕಡಿಮೆ ಇದ್ದರೆ ಅಲ್ಲಿ ಕಲಬೆರಕೆ ಇರುವ ಸಾಧ್ಯತೆ ಹೆಚ್ಚು.
3. ತಪ್ಪದೇ ಬಿಲ್ ಪಡೆಯಿರಿ
ಬಿಲ್ ಇಲ್ಲದೆ ಎಂದಿಗೂ ಚಿನ್ನ ಖರೀದಿಸಬೇಡಿ. ನೀವು ಪಡೆಯುವ ಬಿಲ್ನಲ್ಲಿ ಚಿನ್ನದ ತೂಕ, ಕ್ಯಾರೆಟ್ (ಶುದ್ಧತೆ), ಅಂದಿನ ದರ ಮತ್ತು ಮೇಕಿಂಗ್ ಚಾರ್ಜ್ಗಳ ಬಗ್ಗೆ ಸ್ಪಷ್ಟ ಮಾಹಿತಿ ಇರಲಿ. ಇದು ಭವಿಷ್ಯದಲ್ಲಿ ಚಿನ್ನ ಮಾರಾಟ ಮಾಡಲು ಅಥವಾ ದೂರು ನೀಡಲು ಸಹಕಾರಿಯಾಗುತ್ತದೆ.
4. ಇಂದಿನ ದರ ಮತ್ತು ಮೇಕಿಂಗ್ ಚಾರ್ಜ್ ಗಮನಿಸಿ
ಖರೀದಿಗೆ ಹೋಗುವ ಮೊದಲು ಅಂದಿನ ಅಧಿಕೃತ ಚಿನ್ನದ ದರವನ್ನು ಪರಿಶೀಲಿಸಿ. ಆಭರಣಗಳ ಮೇಲೆ ವಿಧಿಸುವ ಮೇಕಿಂಗ್ ಚಾರ್ಜ್ (Making Charges) ಬಗ್ಗೆ ಜ್ಯುವೆಲ್ಲರ್ ಜೊತೆ ಚರ್ಚಿಸಿ. ಚೌಕಾಸಿ ಮಾಡುವ ಮೂಲಕ ಇದನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿಕೊಳ್ಳಬಹುದು.
5. ತೂಕ ಮರುಪರಿಶೀಲಿಸಿ
ಆಭರಣವನ್ನು ಅಂತಿಮವಾಗಿ ನಿಮ್ಮ ಕೈಗೆ ನೀಡುವ ಮುನ್ನ ಮತ್ತು ಬಿಲ್ ಮಾಡುವ ಮೊದಲು ಮತ್ತೊಮ್ಮೆ ತೂಕದ ಯಂತ್ರದಲ್ಲಿ ಪರಿಶೀಲಿಸಿ. ಬಿಲ್ನಲ್ಲಿ ನಮೂದಿಸಿರುವ ತೂಕ ಮತ್ತು ಯಂತ್ರದಲ್ಲಿ ತೋರಿಸುವ ತೂಕ ಸಮನಾಗಿರುವುದನ್ನು ಖಚಿತಪಡಿಸಿಕೊಳ್ಳಿ.